ಕಲೆ ಹೃದಯದ ಭಾಷೆ

January 5, 2016

ಕಲೆ ಎಂದರೆ ಸುಂದರವಾದ ವಸ್ತುವಿನ ನಿರ್ಮಾಣ. ಸುಖ ಜೀವನದ ನಿರ್ವಹಣೆ. ಕಲಿಸುವ ಒಂದು ಸಾಧನಾ ಮಾರ್ಗ. ಪ್ರಕೃತಿಯ ಅನುಕರಣೆಯೊಂದಿಗೆ ಪ್ರಾರಂಭಗೊಂಡ ಮಾನವನ ಕಲಾತ್ಮಕತೆ, ನಂತರ ಮಾನವನು ತನ್ನ ಹೃದಯದ ಭಾವಗಳಿಗೆ ಅನುಸಾರವಾಗಿ ಸೌಂದರ್ಯ ನಿರ್ಮಾಣ ಮಾಡಲು ಕಲೆತನು. ಒಂದು ಮಾಧ್ಯಮದ ಮೂಲಕ ಭಾವನೆಗಳನ್ನು ನಮ್ಮ ಚಿತ್ತವೃತ್ತಿಗೆ ತಂದು ಆನಂದವನ್ನು ಉಂಟುಮಾಡುವ ಅಭಿವ್ಯಕ್ತಿಗೆ ಅಥವಾ ಅಭಿವ್ಯಕ್ತಿಯ ಪ್ರದರ್ಶನಕ್ಕೆ ಕಲೆ ಎನ್ನುತ್ತೇವೆ. ಮನುಷ್ಯನ ಭಾವನೆಗಳಿಗೆ ಭಾಷೆಯ ರೂಪವನ್ನು ನೀಡಿ ಕಲಾತ್ಮಕವಾಗಿ ವ್ಯಕ್ತಪಡಿಸುವ ಮಾಧ್ಯಮವೇ ಲಲಿತ ಕಲೆ. ನೃತ್ಯ, ಸಂಗೀತ, ನಾಟಕ, ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಇವು ಲಲಿತ ಕಲೆಗಳೆಂದು ಗುರುತಿಸಲ್ಪಟ್ಟಿದೆ. ಈ ಎಲ್ಲಾ ಕಲೆಗಳು ಪ್ರತ್ಯೇಕವಾಗಿ ಕಂಡರೂ, ಇವುಗಳ ಉದ್ದೇಶ ಸೌಂದರ್ಯದ ಸಾಕ್ಷಾತ್ಕಾರ ಮತ್ತು ಅದರ ಅಭಿವ್ಯಕ್ತಿ.

 

ಕಲೆಯು ಒಬ್ಬ ವ್ಯಕ್ತಿಯಿಂದಾಗ ಬೇಕಾದ ಸೃಷ್ಟಿ. ಈ ಸೌಂದರ್ಯದ ಸೃಷ್ಟಿಯು, ಭಾವ ಪ್ರಚೋದನೆ, ರಸ ಪ್ರತಿಪಾದನೆಗಳ ಮೂಲಕ ಪ್ರೇಕ್ಷಕನಿಗೆಸೌಂದರ್ಯಾನುಭವವನ್ನು ಉಂಟುಮಾಡಿ, ತನ್ಮೂಲಕ ಸಹೃದಯರ ಆನಂದಕ್ಕೆ ಕಾರಣವಾಗುತ್ತದೆ. ದ.ರಾ ಬೇಂದ್ರೆಯವರ ಅಭಿಪ್ರಾಯದಲ್ಲಿ“ಸೌಂದರ್ಯವೆಂಬುದು ಕಣ್ಣಿನ ಮಾತಲ್ಲ, ಕಣ್ಣಿಗೂ ಕಣ್ಣಾಗಿ ಒಳಗಿಹುದು.” ಆನಂದವು ಆಂತರಿಕವಾದುದ್ದರಿಂದ ಸೌಂದರ್ಯವು ವ್ಯಕ್ತಿಯ ಅಂತರಂಗದ ಅನುಭವವಾಗಿದೆ. ಯಾವುದೇ ಕಲೆಯ ಮೂಲ ಉದ್ದೇಶ ರಸೋತ್ಪತ್ತಿ.

 

ಹಾಗಿದ್ದರೆ ರಸ ಎಂದರೇನು? ಇದನ್ನು ವಿವರಿಸಲು, ೨ನೇ ಶತಮಾನದಲ್ಲಿ ನಾಟ್ಯಶಾಸ್ತ್ರವೆಂಬ ಮಹಾಗ್ರಂಥವನ್ನು ರಚಿಸಿದ ಭರತನಲೋಕಪ್ರಿಯವಾದ ‘ರಸಸೂತ್ರ’ ಔಚಿತ್ಯಪೂರ್ಣವಾಗಿಯೂ, ಸುಲಭವಾಗಿ ಗ್ರಹಿಸಲು ಸಾಧ್ಯವಾಗುವ ಕಾರಣ, ಈ ಸೂತ್ರವನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ.

 

ರಸಸೂತ್ರ – “ವಿಭಾವಾನುಭಾವ್ಯಭಿಚಾರಿಸಂಯೋಗಾದ್ರಸನಿಷ್ಪತ್ತಿಃ ” – ವಿಭಾವಗಳು, ಅನುಭಾವಗಳು, ವ್ಯಭಿಚಾರಿ (ಸಂಚಾರಿ) ಭಾವಗಳ ಸಂಯೋಗದಿಂದ ರಸನಿಷ್ಪತ್ತಿಯಾಗುವುದು.

 

ಒಂದು ಸುಂದರವಾದ ಕಾವ್ಯವನ್ನು ಓದುವುದರಿಂದ ಅಥವಾ ನೃತ್ಯವನ್ನು ನೋಡುವುದರಿಂದ ಪ್ರೇಕ್ಷಕನಲ್ಲಿ ಉಂಟಾಗುವ ವಿಶೇಷಕ್ಕೆ ‘ರಸ’ ಎಂದು ಹೆಸರು. ಬಗೆಬಗೆಯ ಪದಾರ್ಥಗಳಿಂದ ಕಲಸಿದ ಅನ್ನವನ್ನು ಊಟ ಮಾಡಿದ ಪ್ರಸನ್ನ ಮನಸ್ಕರು ಹೇಗೆ ರಸವನ್ನು ಆಸ್ವಾದಿಸಿ ಸಂತೋಷ ಪಡುವರೋ, ಹಾಗೆ ಬಗೆಬಗೆಯ ಭಾವಾಭಿನಯಗಳಿಂದ ಕೂಡಿದ ನೃತ್ಯವನ್ನು ಪ್ರಸನ್ನ ಮನಸ್ಸಿನಿಂದ ವೀಕ್ಷಿಸಿದ ಸಹೃದಯರು ರಸಾನಂದವನ್ನು ಅನುಭವಿಸಿ ಹರ್ಷಾದಿಗಳನ್ನು ಹೊಂದುತ್ತಾರೆ.

 

ಉದಾ – ಲೋಕವ್ಯವಹಾರದಲ್ಲಿ ಶೋಕವು ದು:ಖಾತ್ಮಕವಾದರೂ, ಕಾವ್ಯ ನೃತ್ಯದ ಭಾಷೆಯಲ್ಲಿ ಲೌಕಿಕತ್ವವನ್ನು ಕಳೆದುಕೊಂಡು ಕರುಣಾರಸದ ರೂಪವನ್ನು ಹೊಂದಿ ಆಹ್ಲಾದಮಯವಾಗಿರುತ್ತದೆ. ಇದರಂತೆಯೇ ರತಿ, ಉತ್ಸಾಹ, ಭಯ, ಆಶ್ಚರ್ಯ, ಮೊದಲಾದ ಮಾನವನ ಎಲ್ಲಾ ಭಾವಗಳು ಲೋಕದಲ್ಲಿ ಪ್ರಿಯವಾಗಿರಲಿ ಅಪ್ರಿಯವಾಗಿರಲಿ, ನೃತ್ಯ ಕಾವ್ಯಗಳ ಭಾಷೆಯಲ್ಲಿ ಶೃಂಗಾರ, ವೀರ, ಭಯಾನಕ, ಅದ್ಭುತ ಮೊದಲಾದ ವಿವಿಧ ರಸಾಗಳಾಗುತ್ತದೆ. ಜೀವನದಲ್ಲಿ ಶೋಕವೆಂಬ ಭಾವಕ್ಕೆ ಪ್ರಿಯರ ಅಗಲಿಕೆ ಒಂದು ಕಾರಣ, ಆಗಲಿಕೆಯಾದಾಗ ಕಣ್ಣಿನಲ್ಲಿ ನೀರು ತುಂಬುವುದು, ಮಾತು ಹೊರಡದಿರುವುದು, ಪ್ರಜ್ಞಾಹೀನನಾಗುವುದು, ಬಿಕ್ಕಿ ಅಳುವುದು, ಮೊದಲಾದ ಕಾರ್ಯಗಳು ನಡೆಯುತ್ತವೆ. ಭಾವವು ಮಾನಸಿಕ ವ್ಯಾಪಾರವಾಗಿರುವುದರಿಂದ, ಅದು ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ, ಅದನ್ನು ಅರಿಯಲು ಕಾರಣ ಮತ್ತು ಕಾರ್ಯಗಳನ್ನು ಅರಿತುಕೊಳ್ಳುವುದೊಂದೇ ದಾರಿ. ಇನ್ನೂ ನೃತ್ಯ ಕಾವ್ಯಗಳಲ್ಲಿ ಭಾವವನ್ನು ಉದ್ಬೋಧಗೊಳಿಸುವ ಕಾರಣ ಸಾಮಾಗ್ರಿಯೇ ‘ವಿಭಾವ’. ಭಾವದ ಕಾರ್ಯಸಮುದಾಯಕ್ಕೆ ‘ಅನುಭಾವ’ ಎಂದು ಹೆಸರು. ಶೋಕ ಎಂಬ ಸ್ಥಾಯಿ ಭಾವ ನಡೆಯುತ್ತಿರುವಾಗ ನಡುನಡುವೆ ಸುಳಿದು ಲಯವಾಗುವ ಚಿಂತೆ, ಸ್ಮೃತಿ, ನಾಚಿಕೆ, ವ್ಯಾಧಿ, ವಿಷಾದ, ಮರಣ, ಆವೇಗ ಇತ್ಯಾದಿಗಳು ಅಲ್ಪಕಾಲದ ಭಾವಗಳೇ ವ್ಯಭಿಚಾರಿ(ಸಂಚಾರಿ) ಭಾವಗಳು. ಈ ಮೇಲಿನ ಉದಾಹರಣೆಯಲ್ಲಿ, ಒದಗಿ ಬಂದಿರುವ ಆಗಲಿಕೆಯೇ ವಿಭಾವ, ಅಪ್ಪಿಕೊಳ್ಳುವುದು, ಮೂರ್ಛೆ ತಪ್ಪಿ ಬೀಳುವುದು, ಬಿಕ್ಕಿ ಅಳುವುದು ಈ ಮೊದಲಾದ ಸಮಸ್ತ ಕ್ರಿಯೆಗಳು ಅನುಭಾವ, ಈ ಭಾವಗಳ ನಡುವೆ ಚಿಂತೆ, ವಿಷಾದ, ಆವೇಗ ಇತ್ಯಾದಿ ಸಂಚರಿಸುವ ಭಾವಗಳು ಸಂಚಾರಿ/ವ್ಯಭಿಚಾರಿ ಭಾವಗಳು. ಸ್ಥಾಯಿಭಾವದೊಂದಿಗೆ, ವಿಭಾವಾನುಭಾವ ವ್ಯಭಿಚಾರಿ ಭಾವಗಳನ್ನು ಪರಿಭಾವಿಸಿದರೆ ಮಾತ್ರಕ್ಕೆ ಕರುಣಾರಸವನ್ನು ಆಸ್ವಾದಿಸುತ್ತೇವೆ.

 

ರಸವಿರುವುದು ಅನುಭವದಲ್ಲಿ, ಆಗಾಗ ಏಳುತ್ತದೆ, ಬೀಳುತ್ತದೆ, ತೋರುತ್ತದೆ, ಮರೆಯಾಗುತ್ತದೆ. ಅದು ಭಾವನಾ ಲೋಕದ ಶಕ್ತಿ, ಮಾನಸಿಕ ಹಾಗೂ ಹೃದಯದ ಆನಂದಾನುಭವ. ಅನುಭವದ ಆಸರೆ ಇಲ್ಲದೆ ರಸ ಒದಗಿಬರಲಾರದು. ಈ ಕಾರಣದಿಂದಲೇ ‘ಆನಂದೋ ಬ್ರಹ್ಮೇತಿವ್ಯಜನಾತ್’ ಎಂದು ಉಪನಿಷತ್ ವಾಕ್ಯದಲ್ಲಿ ಆನಂದವನ್ನು ದೈವತ್ವಕ್ಕೆ ಸಮೀಕರಿಸಿದೆ. ಮನುಷ್ಯನು ಯಾವುದನ್ನು ಬುದ್ಧಿಪೂರ್ವಕವಾಗಿ ಮಾಡುವನೋ ಆ ಎಲ್ಲಾ ಕಾರ್ಯಗಳೂ ಕಲೆಗಳೇ. ಮನುಷ್ಯನ ಅಂತರಂಗದ ಭಾವನೆಗಳು ಮನಸ್ಸಿನ ಮೂಲಕ ಹೊರ ಪ್ರವಹಿಸಿದಾಗ ವಿಜ್ಞಾನ, ತರ್ಕ ಇತ್ಯಾದಿಗಳು, ಶಾಸ್ತ್ರವಾಗಿ ಪರಿಣಮಿಸಿದರೆ, ಮನಸ್ಸಿನ ಕಲ್ಪನಾಲೋಕದ ಸಮುದ್ರವನ್ನು ಕಡೆದಾಗ ಹೊರಬಂದ ಅಮೃತವೇ ಲಲಿತ ಕಲೆಗಳು. ಈ ಲಲಿತ ಕಲೆಗಳ ಸಾಮ್ರಾಜ್ಯದಲ್ಲಿ ಆನಂದವೇ ಅಂತ್ಯ ಸಾಧನೆ, ಇದೇ ರಸಾನುಭವ ಎಂದು ಅಲಂಕಾರಿಕರಿಂದ ಕರೆಯಲ್ಪಟ್ಟಿದೆ. ಕಲೆಯ ರಸವನ್ನು ಹೀಗೆ ಅನುಭವಿಸುವವನೇ ಸಹೃದಯ. ಕಲಾವಿದ ಪ್ರದರ್ಶಿಸುವ ವಿಷಯವನ್ನು ನೇರವಾಗಿ ಅನುಭವಿಸಿ ಮೈಮರೆಯುತ್ತಾನೆ. ರಸೋದಯಕ್ಕೆ ಸಿದ್ಧವಾದ ಮನಸ್ಸು ಸಹೃದಯನದು. ಅವನ ಮನಸ್ಸೆಂಬ ಕನ್ನಡಿ ಸ್ವಚ್ಛವಾಗಿದ್ದಲ್ಲಿ ಕಲಾವಿದನ ಭಾವನೆಗಳು ಇವನಲ್ಲಿ ಪ್ರತಿಫಲಿಸುತ್ತದೆ…

 

(ನಮ್ಮೆಲ್ಲರ ಮೆಚ್ಚಿನ ಗುರು ಭಾನುಮತಿ ಮತ್ತು ಗುರು ಶೀಲಾ ಚಂದ್ರಶೇಖರ್ ರವರಿಗೆ ನಾನೆಂದೂ ಚಿರಋಣಿ. ನನ್ನ MA ವಿದ್ಯಾಭ್ಯಾಸದ ಸಂದರ್ಭದಲ್ಲಿ, ಅಲಂಕಾರ ಶಾಸ್ತ್ರದ ಕುರಿತು ಪಾಠ ಮಾಡಿದ ಡಾ.ಕರುಣಾ ವಿಜೇಂದ್ರರವರಿಗೆ ಮತ್ತು ಡಾ.ಶೋಭಾ ಶಶಿಕುಮಾರ್ ರವರಿಗೆ ಅನಂತಾನಂತ ನಮನಗಳನ್ನು ಈ ಮಾಧ್ಯಮದ ಮೂಲಕ ಅರ್ಪಿಸುತ್ತೇನೆ.)

Tags:

Share on Facebook
Share on Twitter
Please reload

Featured Posts

I'm busy working on my blog posts. Watch this space!

Please reload

Recent Posts

April 16, 2018

March 17, 2018

March 4, 2018

Please reload

Archive
Please reload

Search By Tags
Please reload

Follow Us
  • Facebook Basic Square
  • Twitter Basic Square
  • Google+ Basic Square