ರಸಾಮಾತ್ಯ

ಇತ್ತೀಚಿಗೆ, ನಮ್ಮ ಭಾರತದ ಪಾಚೀನ ಕ್ರೀಡೆಗಳ ಬಗ್ಗೆ ಒಂದು ಪ್ರಬಂಧವನ್ನು ಓದಿದೆ. ಅವುಗಳಲ್ಲಿ ನನ್ನ ಗಮನವನ್ನು ಸೆಳೆದದ್ದು “ಚದುರಂಗ“. ನಾಲಕ್ಕು ಆಟಗಾರರು, ರಾಜ,ಆನೆ, ಕುದುರೆ, ಒಂಟೆ ಇತ್ಯಾದಿಗಳನ್ನು ಕಾಯಿಗಳನ್ನಾಗಿಟ್ಟುಕೊಂಡು ಆಟವಾಡುವ ಈ ಕ್ರೀಡೆ, ಮಹಾಭಾರತದಲ್ಲಿ ಒಂದು ಅವಿಭಾಜ್ಯಾಂಗವಾಗಿ ಪರಿಗಣಿಸಲ್ಪಟ್ಟಿದೆ.

3000 ವರ್ಷಗಳಿಂದ ಆಡಲ್ಪಡುತ್ತಿರುವ ಈ ಪ್ರಾಚೀನ ಆಟ, ಭಾರತದಿಂದ ಪರ್ಷಿಯ ದೇಶಕ್ಕೆ ೬(6) ನೆ ಶತಮಾನದಲ್ಲಿ ರಫ್ತಾಗಿತ್ತು ಎಂದು Sir William Jones “Asiatic researches”ಎಂಬುವ ತಮ್ಮ ಪ್ರಬಂಧ ಒಂದರಲ್ಲಿ ಉಲ್ಲೇಖಿಸಿದ್ದಾರೆ. ಚದುರಂಗ, ಪರ್ಷಿಯ ದೇಶದವರಿಂದ “ಶತ್ರಂಜ್” ಎಂದು ಕರೆಯಲ್ಪಟ್ಟಾಗ, “vazir” ಎಂಬುವ ಮತ್ತೊಂದು ಕಾಯಿಯನ್ನು ಪರಿಚಯಿಸಿದರು. ಕಾಲಾಳುಗಳಿಗಿಂತ (Pawn) ಒಂದು ದರ್ಜೆ ಹೆಚ್ಚಿನ ಮಟ್ಟವನ್ನು ಅದಕ್ಕೆ ನೇಮಿಸಿದರು.

ಇಷ್ಟೇ ಅಲ್ಲದೆ, ಈ ಆಟ, ಚತುರ ಅಂಗಗಳಿಂದ ಕೂಡಿರುತ್ತದೆ (ಓರ್ವ ಸೇನೆಯಲ್ಲಿರುವ ಆನೆಗಳು, ರಥಗಳು, ಕುದುರೆಗಳು ಮತ್ತು ಕಾಲಾಳುಗಳು). ಈ ಆಟದ ಬಗ್ಗೆ “ಅಮರಕೋಷದಲ್ಲಿಯೂ” ಕೂಡ ಪ್ರಸ್ತಾಪವಿದೆ.

H.J.R.Murray ಅವರು “History of chess” ಎಂಬುವ ತಮ್ಮ ಪುಸ್ತಕದಲ್ಲಿ “The game of kings we have today is an evolution of many centuries” ಎಂದು ಉಲ್ಲೇಖಿಸಿದ್ದಾರೆ. ಈ ಆಟ ಯುರೋಪರ ಆಳ್ವೀಕೆಯಲ್ಲಿ “Chess”ಎಂದು ಅನುವಾದಗೊಂಡಿತು. 15 ನೆ ಶತಮಾನದ ನಂತರ, ಯೂರೋಪ್ ದೇಶದಲ್ಲಿ ಸ್ತ್ರೀಯರು ರಾಜ್ಯಾಡಳಿತ ನಡೆಸಲು ಪ್ರಾರಂಭಿಸಿದ ಕಾಲದಲ್ಲಿ “Chess queen” ಎಂಬುವ ಒಂದು ಕಾಯಿಯನ್ನು ಈ ಆಟಕ್ಕೆ ಪರಿಚಯಿಸಿದರು (“Birth of chess queen” by Marilyn Yalom). ಭಾರತದಲ್ಲಿ ಈ ಕಾಯಿಯನ್ನು ಅಮಾತ್ಯ ಅಥವ ಮಂತ್ರಿ ಎಂದು ಕರೆದರು.

ಈ ಅಮಾತ್ಯನ ಪಾತ್ರ , ರಾಜನಿಗಿಂತ ಹೆಚ್ಚು ಕೌಶಲ್ಯ ಮತ್ತು ಚಾತುರ್ಯವನ್ನು ಹೊಂದಿರುತ್ತದೆ . ಅಮಾತ್ಯನಿಲ್ಲದೆ ಆಟ ಮುಂದುವರೆದರೂ ಕೂಡ, ಬಲಹೀನವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಅಮಾತ್ಯನು, ಆಡಳಿತದಲ್ಲಿ ಕಂಡುಬರುವ ವಿಷಮಪರಿಸ್ಥಿತಿಗಳಲ್ಲಿ (crisis) ನಿಯಂತ್ರಕನ ಪಾತ್ರವನ್ನು ನಿರ್ವಹಿಸುತ್ತಾನೆ . ಆಂಗ್ಲದಲ್ಲಿ ಹೇಳಬೇಕೆಂದರೆ, “controlling and buffering a situation” ಎಂಬುವ ಅರ್ಥ ಬರುತ್ತದೆ. ಹೀಗಾಗಿ, ಓರ್ವ ರಾಜನ ಆಡಳಿತವನ್ನು ಸಮತೋಲನಗೊಳಿಸಿ, ಅವನ ಆರೋಗ್ಯಕರ ಅಭಿವ್ರಿದ್ಧಿಗೆ ಸಹಕರಿಸುವ ಮುಖ್ಯ ಪಾತ್ರ ಅಮಾತ್ಯನದ್ದು .

ಒಂದೆಡೆ ರಾಜ್ಯಾಡಳಿತವಾದರೆ, ಮತ್ತೊಂದೆಡೆ ಕಲಾಜಗತ್ತನ್ನ ಆಳುವಂತಹ ರಸರಾಜ್ಯ. ದೃಶ್ಯಮಾಧ್ಯಮವನ್ನು ಅನುಸರಿಸುವಂತಹ ಯಾವುದೇ ಕಲೆಯಾದರು ಸಹ “ರಸ” ಎಂಬುವ ವಿಷಯವನ್ನು ಮುಖ್ಯ್ಯಾಂಗವಾಗಿ ಪರಿಗಣಿಸುತ್ತದೆ. “ರಸ ಆಸ್ವಾದನಸ್ನೇಹಯೋ : ರಸಯಿತಿ” ಎಂಬುವ ಸೂತ್ರ, ಅಮರಕೋಶದಲ್ಲಿರುವ ಉಲ್ಲೇಖನ . ನಮ್ಮೊಳಗೆ ಆಸ್ವಾದನೆಯನ್ನು ಉಂಟುಮಾಡುವ ಮಾದ್ಯಮ ರಸ.

ರುಚಿ ಶುಚಿಯಾದ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸಿ ತಯ್ಯರಿಸುವ ಖಾದ್ಯ, ನಾಲಿಗೆಗೆ ರಸಭರಿತವಾದ ಮುದ ನೀಡುವ ಹಾಗೆ, ಬಗೆಬಗೆಯ ಭಾವನೆಗಳನ್ನು ಸರಿಯಾದ ಪ್ರಮಾಣದಲ್ಲಿ ಸಂಮಿಶ್ರಣಗೊಳಿಸಿದಾಗ , ರಸೋತ್ಪತ್ತಿ ಆಗುತ್ತದೆ (ನಾಟ್ಯಶಾಸ್ತ್ರ– ರಸವಿಕಲ್ಪ).

ಈ ರಸರಾಜ್ಯದಲ್ಲಿನ ಒಂದು ಪ್ರಮುಖವಾದ ರಸವೆಂದರೆ, “ಹಾಸ್ಯ ರಸ“.“ಹಸ್” ಧಾತುವಿನಿಂದ ಜನಿಸಿರುವ ಪದ, ಹಾಸ್ಯ. ಹಾಸ್ಯ ಎಂದರೆ laughter/ mirth ಎಂಬುವ ಅರ್ಥ ಬರುತ್ತದೆ. ಹಾಸ್ಯವೆಂಬುವ ಭಾವನೆಯಿಂದ ಉತ್ಪತ್ತಿಯಾಗುವುದೇ ಹಾಸ್ಯ ರಸ. ಹಾಸ್ಯರಸವೆಂಬುದು ನಮ್ಮ ಲೌಕಿಕ ಚಟುವಟಿಕೆಗಳಿಂದ ಕಲಾಪ್ರಪಂಚದವರೆಗು ಚಿರಪರಿಚಿತ. ನಮ್ಮ ಭಾವನೆಗಳ ನಿಯಂತ್ರಣಾ ಶಕ್ತಿ ಈ ಹಾಸ್ಯಕ್ಕಿದೆ .

“A day without laughter is a day wasted” :- ಪ್ರಸಿದ್ಧ ಹಾಸ್ಯ ನಟ, ಪ್ರಬುದ್ಧ ಜೀವಿಯಾದ Charlie Chaplin ಹೇಳಿರುವ ಈ ಮಾತು ಇಲ್ಲಿ ನೆನೆಪಾಗುತ್ತದೆ . ಹಾಸ್ಯ ಎಂಬುವುದು ನಮ್ಮೆಲ್ಲರ ಜೇವನದ ಸುಖದು:ಖಗಳನ್ನ್ನು ನಿಯಂತ್ರಿಸಿ, ಸಮತೋಲನಗೊಳಿಸಿ, ಉಲ್ಲಾಸದಾಯಕವಾಗಿರಿಸುವ ಒಂದು ಸರಳ ವೈಖರಿ (Path).

ಉದಾಹರಣೆಗೆ ಒಂದು ಭಾರತೀಯ ಮನೋರಂಜನಾತ್ಮಕ ಚಲನಚಿತ್ರವನ್ನು ತೆಗೆದುಕೊಂಡರೆ , ಚಿತ್ರದ ಕಥಾವಸ್ತು ಎಷ್ಟು ಮುಖ್ಯವೋ , ಪ್ರೇಕ್ಷಕರ ಮನಸ್ಸನ್ನು ಹಗುರಗೊಳ್ಳಿಸುವ ಹಾಸ್ಯ ದೃಷ್ಯಗಳೂ ಅಷ್ಟೇ ಮುಖ್ಯ. ಕಥಾವಸ್ತುವನ್ನು ತಲುಪಿಸುವ ಗಂಭೀರ ವಿಷಯಗಳು ಪ್ರೇಕ್ಷರ ಮನಸ್ಸಿಗೆ ಬಾಧಿಸದಂತೆ ಸಮಸ್ಥಿತಿಯಲ್ಲಿರಿಸುವ ಉದ್ದೇಶದೊಂದಿಗೆ ಹಾಸ್ಯ ದೃಶ್ಯಗಳು ಸೇರ್ಪಡೆಗೊಳ್ಳುತ್ತವೆ. ಉಷ್ಣಾಂಷ(Temperature) ಹೆಚ್ಚಿರುವ ಕರಾವಳಿ ಪ್ರದೆಶದಲ್ಲಿ ತಂಗಾಳಿಯ ಸೋಂಕು ತಾಕುವ ಹಾಗೆ.

ಕಲೆಯಲ್ಲಿಯೂ ಸಹ, ಹಾಸ್ಯ ರಸವನ್ನ ನಿಯಂತ್ರಣಾ ಕಾರ್ಯಕ್ಕೆಂದು ಉಪಯೋಗಿಸಲಾಗುತ್ತದೆ. ಹಾಸ್ಯ ರಸದಬಗ್ಗೆ ನಾಟ್ಯ ಶಾಸ್ತ್ರ ನೀಡುವ ಉಲ್ಲೇಖನವನ್ನು ಮೆಲುಕು ಹಾಕುವುದಾದರೆ:

ಹಾಸ್ಯ ರಸದ ಸ್ಥಾಯಿಭಾವ (dominant mood) ಹಸ (humorous mood).

ವಿಚಿತ್ರವಾದ ಉಡುಪು ,ಅಸಮಂಜಸವಾದ ಆಹಾರ್ಯ, ಧೋರಣೆ, ಲೌಲ್ಯ, ಕುಹಕ, ಅಸಭ್ಯ ಭಾಷಾ ಪ್ರಯೋಗ,ಮತ್ತೊಬ್ಬರನ್ನು ಠೀಕಿಸುವುದು, ಇವುಗಳೆಲ್ಲ ಹಾಸ್ಯ ರಸವನ್ನು ಉಂಟುಮಾಡುವ ವಿಭಾವಗಳು (causes). ಇವುಗಳಿಗೆ ತಕ್ಕ ಅನುಭಾವಗಳು ಮತ್ತು ವ್ಯಭಿಚಾರಿಭಾವಗಳು ನಟರ ಕ್ರಿಯಾಕೌಶಲ್ಯತೆಯ(creativity) ಮೇರೆಗೆ ಪ್ರದರ್ಶಿಸಲಾಗುತ್ತದೆ..

ಭರತಮುನಿ, ಹಾಸ್ಯ ರಸವನ್ನು ಎರಡು ವಿಧಗಳಾಗಿ ವಿಂಗಡಿಸುತ್ತಾರೆ.

 • ಆತ್ಮಾಸ್ಥ– ನಟನು/ನರ್ತಕನು ತನ್ನಷ್ಟಕ್ಕೆ ತಾನೆ ನಗುವುದು

 • ಪರಸ್ಥ – ನಟನು/ನರ್ತಕನು ಬೇರೆಯವರನ್ನು ನಗಿಸುವುದು.

ಈ ರಸವನ್ನು 6 ವಿಧಗಳಲ್ಲಿ ಅಭಿನಯಿಸಬಹುದು (ನಾಟ್ಯ ಶಾಸ್ತ್ರದಲ್ಲಿನ ಉಲ್ಲೇಖನ)

 • ಸ್ಮಿತ – charming smile

 • ಹಸಿತ – Gentle laughter attributed to a person of Uttama rank

 • ವಿಹಸಿತ – Gentle open laughter

 • ಉಪಹಸಿತ – satirical laughter of persons coming under the madhyama class

 • ಅಪಹಸಿತ – silly and meaningless laughter

 • ಅತಿಹಸಿತ – loud and roaring laughter displayed by persons of adhama status.

ಶೃಂಗಾರ ಪ್ರಧಾನವಾದ ದೃಶ್ಯಗಳಲ್ಲಿ ಅಥವಾ ಪಾತ್ರಗಳಲ್ಲಿ , ಸ್ಮಿತ, ಹಸಿತ ಮತ್ತು ವಿಹಸಿತದ ಉಪಯೋಗ ಸಾಧ್ಯ. ಉದಾಹರಣೆಗೆ, ನಾಯಕ ನಾಯಕಿಯನ್ನು ಕಂಡಾಕ್ಷಣ ಸ್ಮಿತ, ಅವಳ ಸವಿಯಾದ ಮಾತುಗಳಿಗೆ ಹಸಿತ ಮತ್ತು ಅವಳು ನುಡಿಯುವ ನಗುಚಟಾಕಿಗಳಿಗೆ (Joke) ವಿಹಸಿತನಾಗಿ ಉತ್ತರಿಸಬಹುದು.

ನಾಯಕನ ಅಗಲಿಕೆಯ ಬೇಗೆಯನ್ನು ತಾಳಲಾರದೆ ತನ್ನ ಅಸಹಾಯಕತೆಯನ್ನು ಕಂಡು ಅಪಹಸಿತೆಯಾಗಿ ನಾಯಕಿ ತನ್ನ ಶೋಕವನ್ನು ವ್ಯಕ್ತಪಡಿಸಬಹುದು.

ಇದೇರೀತಿ, ಪ್ರಗಲ್ಭಾವಸ್ಥೆಯಲ್ಲಿರುವ ಖಂಡಿತ ನಾಯಕಿ, ಉಪಹಸಿತೆಯಾಗಿ ತನ್ನ ನಾಯಕನ ಮೇಲಿನ ಕ್ರೋಧವನ್ನು ದೃಢೀಕರಿಸಬಹುದು.

ರಣರಂಗದಲ್ಲಿ ವೈರಿಯ ಸೋಲನ್ನು ಮತ್ತು ತನ್ನ ಗೆಲುವನ್ನು ಕಂಡ ವೀರ ಯೋಧನೊಬ್ಬ ಅತಿಹಸಿತನಾಗಿ ತನ್ನ ಸಾಧನೆಯನ್ನು ಅಂಗೀಕರಿಸಬಹುದು.

ಕಗ್ಗತ್ತಲು ತುಂಬಿರುವ ಭಯಾನಕ ಜಾಗ ಒಂದರಲ್ಲಿ ಸಿಲುಕಿ, ತೀವ್ರವಾದ ಭಯಕ್ಕೆ ಒಳಗಾಗಿ, ಪಾರಾಗುವ ಮಾರ್ಗವೇ ತೋಚದ ಸಂದರ್ಭದಲ್ಲಿ, ಒಂದು ಸಣ್ಣ ಬೆಳಕಿನ ಕಿರಣ ಕಂಡಾಗ, ಅಪಹಸಿತರಾಗುವ ಸಾಧ್ಯತೆಗಳಿವೆ. (Smile of relief)

ಮತ್ತೊಮ್ಮೆ ಖಂಡಿತ ನಾಯಕಿಯ ಉದಾಹರಣೆಯನ್ನು ತೆಗೆದುಕೊಂಡರೆ, ತನ್ನ ನಾಯಕನು ನುಡಿಯುವ ಸುಳ್ಳುಗಳಿಗೆ ಜಿಗುಪ್ಸೆಗೊಂಡು ಉಪಹಸಿತೆಯಾಗಿ ಪ್ರತ್ಯುತ್ತರಿಸಬಹುದು.

ಒಟ್ಟಾರೆ ಹೇಳಬೇಕೆಂದರೆ, ಹಾಸ್ಯ ರಸದ ಛಾಪನ್ನು ಬಳಸಿಕೊಂಡು, ಮಿಕ್ಕ ಏಳು ರಸಗಳ ನಕಾರಾತ್ಮಕ ಪರಿಣಾಮಗಳನ್ನು ನಿಯಂತ್ರಣಗೊಳಿಸಿ , ಪ್ರೇಕ್ಷಕನಿಗೆ ತಲುಪಿಸುವಂತಹ ಸಕ್ರಿಯೆಯನ್ನು ಸಫಲೀಕೃತಗೊಳಿಸಬಹುದು .

ಹಾಗಾದರೆ ಶೃಂಗಾರ ರಸರಾಜನಾದರೆ, ಹಾಸ್ಯ ರಸಾಮಾತ್ಯನಾಗಬಹುದೇ?

#Kannada

Featured Posts
Posts Are Coming Soon
Stay tuned...
Recent Posts
Archive
Search By Tags
No tags yet.
Follow Us
 • Facebook Basic Square
 • Twitter Basic Square
 • Google+ Basic Square